ಭಾರತಿಯಾರ್, ಸತ್ಯಾನಂದ ಸೋಮಸುಂದರ
1879-1959. ತಮಿಳು ಕವಿ, ಸಾಹಿತಿ ಹಾಗೂ ನ್ಯಾಯವಾದಿ. ಹುಟ್ಟಿದ್ದು ಎಟ್ಟಯಪುರಮಿನಲ್ಲಿ. ತಂದೆ ಪಿಟ್ಟಪ್ಪಪಿಳ್ಳೆ ಅಥವಾ ಸುಬ್ರಹ್ಮಣ್ಯ ನಾಯಕರ್. ತಾಯಿ ಮುತ್ತಮ್ಮಾಳ್. ಇವರು ತಿರುನೆಲ್ವೇಲಿಯಲ್ಲಿ ಎಫ್.ಎ. ಮುಗಿಸಿ, ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ. ಮಾಡಿ ಮದರಾಸಿನ ಲಾ ಕಾಲೇಜಿನಲ್ಲಿ ಬಿ.ಎಲ್ (1905) ಪದವಿಪಡೆದರು. 1913ರಲ್ಲಿ ಎಂ.ಎ. ಮಾಡಿದರು. ಕೆಲಕಾಲ ಸರ್ಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆಸಲ್ಲಿಸಿ ಅನಂತರ ತೂತ್ತುಕುಡಿಯಲ್ಲಿ ವಕೀಲರಾಗಿ ದುಡಿದರು. ಬಳಿಕ ಮಧುರೆಗೆ ಹೋಗಿ ವಕೀಲವೃತ್ತಿ ಮುಂದುವರಿಸಿದರು. 1933ರಿಂದ 1938ರತನಕ ಅಣ್ಣಾಮಲೈ ವಿಶ್ವವಿದ್ಯಾಲಯದ ತಮಿಳು ವಿಭಾಗದ ಮುಖ್ಯಸ್ಥರಾಗಿದ್ದರು.

	ದಶರಥನ್ ಕುರೈಯುಂ ಕೈಕೇಯಿ ನಿರೈಯಂ (ದಶರಥನ ಕೊರತೆಯೂ ಕೈಕೇಯಿಯ ಪತಿನಿಷ್ಠೆಯೂ-1926); ತಿರುವಳ್ಳುವರ್ (1929); ಚೇರರ್‍ದಾಯ ಮುರೈ (ಚೇರರದಾಯಕ್ರಮ-1929); ಚೇರರ್ ಪೇರೂರು (ಚೇರರ ರಾಜಧಾನಿ-1917) ಎಂಬವು ಇವರ ಸಂಶೊಧನಾ ಕೃತಿಗಳು. ಇವುಗಳಲ್ಲಿ ಮೊದಲನೆಯದನ್ನು ಬಿಟ್ಟುಳಿದ ಮೂರು ಕೃತಿಗಳನ್ನು ಇಂಗ್ಲಿಷಿನಲ್ಲೂ ಬರೆದಿದ್ದಾರೆ. ಮಾರಿವಾಯಿಲ್ (ಮೇಘದ ಮುಖಾಂತರ) ಮತ್ತು ಮಂಗಲ್ಕು ರಿಚ್ಚಿ ಪ್ಪೊಂಗಲ್ ನಿಗಳ್ ಚಿ (ಮಂಗಲ ಕುರಿಚ್ಚಿಯ ಪೊಂಗಲ್ ಹಬ್ಬ) ಎಂಬವು ಇವರ ಕವನ ಸಂಕಲನಗಳು. ತಮಿಳಿನ ತೊಲ್ ಕಾಪ್ಪಿಯಮ್ ಎಂಬ ಗ್ರಂಥದ ಕೆಲವು ಭಾಗಗಳಿಗೆ ಹೊಸ ಕ್ರಮದಲ್ಲಿ ವ್ಯಾಖ್ಯಾನವನ್ನು ಬರೆದಿದ್ದಾರೆ.							
	(ಎಸ್.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ